ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು ಕಾರ್ಯಕಾರಿಣಿ ಸಭೆ: ಶಿಕ್ಷಕರ ಶ್ರೇಯೋಭಿವೃದ್ಧಿಗೆ ಬದ್ಧತೆಯ ಸಂದೇಶ
ಬೆಳಗಾವಿ: ನಗರದ ನ್ಯೂ ಸರ್ಕಿಟ್ ಹೌಸ್‌ನಲ್ಲಿ ರವಿವಾರ ಆಗಸ್ಟ್ 30ರಂದು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು (ರಿ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆಯು ಅತ್ಯಂತ ಗಂಭೀರ ಹಾಗೂ ಅರ್ಥಪೂರ್ಣ ಚರ್ಚೆಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪರಿಷತ್ತಿನ ರಾಜ್ಯಧ್ಯಕ್ಷರಾದ ಸಂಗಮೇಶ ಖನ್ನಿನಾಯ್ಕರ ಅವರು, ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಎದುರಿಸುತ್ತಿರುವ ವೃತ್ತಿಪರ ಹಾಗೂ ಆಡಳಿತಾತ್ಮಕ ಸವಾಲುಗಳ ಕುರಿತು ಗಂಭೀರ ಕಳಕಳಿ ವ್ಯಕ್ತಪಡಿಸಿದರು. ಶಿಕ್ಷಕರ ಮೇಲಿನ ಅನಗತ್ಯ ಕೆಲಸದ ಒತ್ತಡವನ್ನು ಕಡಿಮೆ ಮಾಡುವುದು, ಅವರ ಹಕ್ಕುಗಳ ರಕ್ಷಣೆ ಮತ್ತು ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಕಾರಾತ್ಮಕ ಸುಧಾರಣೆ ತರುವ ನಿಟ್ಟಿನಲ್ಲಿ ಸಂಘಟನೆಯು ಎಲ್ಲರ ಸಹಕಾರದೊಂದಿಗೆ ನಿರಂತರ ಪ್ರಯತ್ನ ಹಾಗೂ ಧ್ವನಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಜೊತೆಗೆ, ಪರಿಷತ್ತಿನ ಮುಂದಿನ ಕಾರ್ಯಕಲಾಪಗಳ ರೂಪರೇಷೆಗಳ ಬಗ್ಗೆ ಸಭೆಗೆ ಸ್ಪಷ್ಟ ಮಾರ್ಗದರ್ಶನ ನೀಡಿದರು.
ಕೋಶಾಧ್ಯಕ್ಷರಾದ ಸೋಮಶೇಖರ ಹಲಸಗಿ ಅವರು ಮಾತನಾಡಿ, ಸಂಘಟನೆಯ ತಳಮಟ್ಟದ ಬಲವರ್ಧನೆಗೆ ಒತ್ತು ನೀಡುವ ಅಗತ್ಯವನ್ನು ಒತ್ತಿಹೇಳಿದರು. ಶಿಕ್ಷಕರ ಪ್ರಮುಖ ಸಮಸ್ಯೆಗಳು, ಇಂದಿನ ಸ್ಪರ್ಧಾತ್ಮಕ ಶೈಕ್ಷಣಿಕ ಕ್ಷೇತ್ರದ ಜ್ವಲಂತ ಸವಾಲುಗಳು ಹಾಗೂ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹಮ್ಮಿಕೊಳ್ಳಬೇಕಾದ ರಚನಾತ್ಮಕ ಕಾರ್ಯಚಟುವಟಿಕೆಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಸಲಹೆಗಳನ್ನು ಸ್ವೀಕರಿಸಿದರು.
ನಂತರ ಪ್ರಧಾನ ಕಾರ್ಯದರ್ಶಿಗಳಾದ ಆರ್.ಎಸ್. ಹಿರೇಗೌಡರ ಅವರು ವಾರ್ಷಿಕ ಅಡಾವೆ ಪತ್ರವನ್ನು ಮಂಡಿಸಿ, ಸಂಘಟನೆಯ ಆರ್ಥಿಕ ಪಾರದರ್ಶಕತೆ ಹಾಗೂ ವಾರ್ಷಿಕ ವರದಿಯನ್ನು ಓದಿ ಒಪ್ಪಿಸಿದರು. ಸಭೆಯ ಪ್ರಮುಖ ಘಟ್ಟದಲ್ಲಿ, ಸಂಘಟನೆಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ ರಾಜ್ಯ ಹಾಗೂ ಜಿಲ್ಲಾ ಕಮಿಟಿಗೆ ನೂತನ ಅಧ್ಯಕ್ಷರು ಮತ್ತು ಸಮರ್ಥ ಪದಾಧಿಕಾರಿಗಳನ್ನು ಅಧಿಕೃತವಾಗಿ ನೇಮಕ ಮಾಡಲಾಯಿತು.
ಈ ರಾಜ್ಯಮಟ್ಟದ ಮಹತ್ವದ ಕಾರ್ಯಕಾರಿಣಿ ಸಭೆಯಲ್ಲಿ ಶಿಕ್ಷಕರಾದ ಎಂ.ಎಸ್. ಹೊಂಗಲ, ಸುರೇಶ್ ಸಕ್ರೆನವರ, ಶಿವಪ್ಪ ಮಾಳಯ್ಯನವರ, ಶಿವಯೋಗಿ ಹಿರೇಮಠ, ರಂಜನಾ ಪಂಚಾಳ, ಗಿರಿಜಾ ಪಲ್ಲೇದ, ಎನ್.ಎಂ. ಕಬ್ಬೂರ, ಸುಭಾಷ್ ಬಸ್ತವಾಡ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದು ಸಭೆಯ ಯಶಸ್ವಿಗೆ ಕಾರಣರಾದರು.
ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೆ ಸಭೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಂದವಾಗಿ ಪರಿಷತ್ತಿನ ವಿಭಾಗೀಯ ಸಂಚಾಲಕರಾದ ಆರ್.ವಿ. ಬಡಿಗೇರ ಅವರು ನಿರೂಪಿಸಿಕೊಟ್ಟರು.ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಸಂಗಮೇಶ ಖನ್ನಿನಾಯ್ಕರ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆರ್ ಎಸ್ ಹಿರೇಗೌಡರ್ ಇವರಿಬ್ಬರನ್ನು ವಿಯಟ್ನಾಮ್ ಅಂತರಾಷ್ಟ್ರೀಯ ಫಿಲೋಸಿಪ್ ಪ್ರಶಸ್ತಿ ಪಡೆದ ಪ್ರಯುಕ್ತ ಸನ್ಮಾನಿಸಲಾಯಿತು

